Are you unable to read text? Download FontHide

ಆಧಾರ್‌ ಕಾರ್ಡ್‌ ಪಡೆದಿಲ್ವಾ? ಈಗ ನೋಂದಣಿ ಮಾಡ್ಸಿ

ಬೆಂಗಳೂರು: ಕೇಂದ್ರ ಸರ್ಕಾರ ದೇಶವಾಸಿಗಳಿಗೆ ನೀಡುತ್ತಿರುವ ವಿಶಿಷ್ಟ ಗುರುತಿನ ಸಂಖ್ಯೆ 'ಆಧಾರ್‌' ನೋಂದಣಿಯ ಎರಡನೇ ಹಂತ ರಾಜ್ಯದಲ್ಲಿ ಕೊನೆಗೂ ಪ್ರಾರಂಭಗೊಂಡಿದೆ. ಮುಂದಿನ ಒಂದು ವರ್ಷದೊಳಗೆ ರಾಜ್ಯದ ಒಟ್ಟು 3.81 ಕೋಟಿ ನಾಗರಿಕರಿಗೆ 'ಆಧಾರ್‌' ಕಾರ್ಡ್‌ ಲಭ್ಯವಾಗಲಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ದ ನೇತೃತ್ವದಲ್ಲಿ ಇ-ಆಡಳಿತ ಇಲಾಖೆಯು ರಾಜ್ಯದ 21 ಜಿಲ್ಲೆಗಳಲ್ಲಿ 2ನೇ ಹಂತದ 'ಆಧಾರ್‌' ಗುರುತಿನ ಚೀಟಿ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದೆ. ಅದಕ್ಕಾಗಿ ಈಗ ಒಟ್ಟು 1200 ಆಧಾರ್‌ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಮೊದಲ ಹಂತದಲ್ಲಿ ರಾಜ್ಯದಲ್ಲಿ ಒಟ್ಟು 1.40 ಕೋಟಿ ನಾಗರಿಕರಿಗೆ ಆಧಾರ್‌ ಕಾರ್ಡ್‌ ವಿತರಿಸಲಾಗಿದೆ. ಮೈಸೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಶೇ.97ರಷ್ಟು 'ಆಧಾರ್‌' ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಏಳು ಜಿಲ್ಲೆಗಳಲ್ಲಿ (ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಗದಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ ಮತ್ತು ಉಡುಪಿ) ಜನಗಣತಿ ಇಲಾಖೆಯಡಿ ಆಧಾರ್‌ ನೋಂದಣಿ ಕಾರ್ಯ ನಡೆಯುತ್ತಿದೆ. ಹೀಗಾಗಿ, 2ನೇ ಹಂತದಲ್ಲಿ ಇ-ಆಡಳಿತ ಇಲಾಖೆಯು ಒಟ್ಟು 21 ಜಿಲ್ಲೆಗಳಲ್ಲಿ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ.
4 ಖಾಸಗಿ ಕಂಪನಿಗಳ ಆಯ್ಕೆ:
2ನೇ ಹಂತದ ಆಧಾರ್‌ ನೋಂದಣಿ ಕಾರ್ಯಕ್ಕೆ ನೈನ್‌ ಸ್ಟಾರ್‌ ಟೆಕ್ನಾಲಜೀಸ್‌ ಲಿಮಿಟೆಡ್‌, ಶ್ರೀವನ್‌ ಇನ್ಫೋ ಕಾಮ್‌ ಲಿ., ಮಾರ್ಸ್‌ ಟೆಲಿಕಾಂ ಲಿ., ಒರಿಜಿನ್‌ ಐಟಿಎಫ್ಎಸ್‌ ಲಿ. ಎಂಬ ನಾಲ್ಕು ಖಾಸಗಿ ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಇ-ಆಡಳಿತ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಆಧಾರ್‌ ನೋಂದಣಿ ಮೇಲುಸ್ತುವಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಜಿಲ್ಲೆಯ ಜನಸಂಖ್ಯೆ ಆಧರಿಸಿ 50 ರಿಂದ 300 ನೋಂದಣಿ ಕೇಂದ್ರ ಸ್ಥಾಪಿಸಲಾಗುವುದು. ಪ್ರತಿ ಕೇಂದ್ರದಲ್ಲಿ 2 ಅಥವಾ 3 ಕಂಪ್ಯೂಟರ್‌ ಅಳವಡಿಸಿದ್ದು, ಒಂದು ದಿನಕ್ಕೆ ಸುಮಾರು 100 ನಾಗರಿಕರನ್ನು ನೋಂದಣಿ ಮಾಡಿಸಿಕೊಳ್ಳಲಾಗುವುದು. ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸುವ ಈ ಕೇಂದ್ರಗಳಿಗೆ ನಾಗರಿಕರು ಮೂಲ ದಾಖಲೆಗಳೊಂದಿಗೆ ತೆರಳಿ ನೋಂದಣಿ ಮಾಡಬಹುದು. ನೋಂದಣಿಯಾದ ನಾಗರಿಕರಿಗೆ 90 ದಿನದೊಳಗೆ ಆಧಾರ್‌ ಕಾರ್ಡ್‌ ನೀಡಲಾಗುವುದು ಎಂದು ಅವರು 'ಉದಯವಾಣಿ'ಗೆ ತಿಳಿಸಿದರು.
ಕಟ್ಟುನಿಟ್ಟಾಗಿ ದಾಖಲೆ ಪರಿಶೀಲನೆ:
ಮೊದಲ ಹಂತದ ನೋಂದಣಿಯಲ್ಲಿ ಬೋಗಸ್‌ ದಾಖಲೆ ನೀಡಿ ಆಧಾರ್‌ ಕಾರ್ಡ್‌ ಪಡೆಯುವ ಯತ್ನ ನಡೆದಿತ್ತು. ಈ ಕಾರಣಕ್ಕೆ 2ನೇ ಹಂತದಲ್ಲಿ ನೋಂದಣಿ ವೇಳೆ ನಾಗರಿಕರು ಹಾಜರುಪಡಿಸುವ ವಿಳಾಸ- ಗುರುತಿನ ಮೂಲ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತದೆ. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರಿಗೆ ಪ್ರತ್ಯೇಕ ಕೋಡ್‌ ಸಂಖ್ಯೆ ನೀಡಲಾಗಿದೆ.
ಬೆಂಗಳೂರಿನಲ್ಲಿ 64 ಕೇಂದ್ರ:
ಬೆಂಗಳೂರು ನಗರದಲ್ಲಿ ಆಧಾರ್‌ ನೋಂದಣಿಗೆ ಈಗ 64 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 153 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಒಟ್ಟು 29 ವಾರ್ಡ್‌ ಕಚೇರಿಯಲ್ಲಿ ಆಧಾರ್‌ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಸದ್ಯ 18 ವಾರ್ಡ್‌ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.

'ಭಾಗ್ಯಲಕ್ಷ್ಮಿ'ಗೂ ಆಧಾರ್‌ ಸಂಖ್ಯೆ
2ನೇ ಹಂತದಲ್ಲಿ ಆಧಾರ್‌ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಳ್ಳುವ ನಾಗರಿಕರು ಸಾಮಾಜಿಕ ಭದ್ರತಾ ನಿವೃತ್ತಿ ವೇತನ, ಪಡಿತರ ಚೀಟಿ, ವಿದ್ಯುತ್‌ ಐಪಿ ಸೆಟ್‌ ಬಿಲ್‌, ಭಾಗ್ಯಲಕ್ಷ್ಮಿಬಾಂಡ್‌, ನರೇಗಾ ಕಾರ್ಡ್‌, ಎಲ್‌ಪಿಜಿ ಕಾರ್ಡ್‌, ಹಾಲು ಉತ್ಪಾದಕರ ಸಂಘದ ಸದಸ್ಯತ್ವ ಹಾಗೂ ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದರೆ, ಅವುಗಳನ್ನು ನೋಂದಣಿ ಕೇಂದ್ರಕ್ಕೆ ಹಾಜರುಪಡಿಸಬೇಕು. ಅಲ್ಲಿ ಮೇಲ್ಕಂಡ ಸರ್ಕಾರಿ ಯೋಜನಾ ಸೌಲಭ್ಯಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಫ‌ಲಾನುಭವಿಗಳನ್ನು 'ಆಧಾರ್‌' ಸಂಖ್ಯೆಗೆ ಸೇರ್ಪಡೆಗೊಳಿಸಲಾಗುವುದು. ಆ ಮೂಲಕ ಮುಂದೆ ಈ ಎಲ್ಲ ಸೌಲಭ್ಯಗಳಿಗೂ ಆಧಾರ್‌ ಸಂಖ್ಯೆಯನ್ನೇ ಪರಿಗಣಿಸಲಾಗುತ್ತದೆ.

ನೋಂದಣಿಗೆ ಏನು ಮಾಡಬೇಕು?
ನಾಗರಿಕರು ತಮ್ಮ ಗುರುತು ಹಾಗೂ ವಿಳಾಸಕ್ಕೆ ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ನೋಂದಣಿ ಕೇಂದ್ರಕ್ಕೆ ಬರಬೇಕು. ಆಧಾರ್‌ ನೋಂದಣಿ ಅರ್ಜಿ ಕೇಂದ್ರದಲ್ಲೇ ಉಚಿತವಾಗಿ ಲಭ್ಯವಿದ್ದು, ಅವುಗಳನ್ನು ಸ್ಥಳದಲ್ಲೇ ಭರ್ತಿ ಮಾಡಿ ಸೂಕ್ತ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿ ಬಯೋಮೆಟ್ರಿಕ್ಸ್‌ ಮಾಡಿಸಿಕೊಳ್ಳಬೇಕು. ಗುರುತಿಗೆ 18 ದಾಖಲೆಗಳನ್ನು ಪಟ್ಟಿ ಮಾಡಿದ್ದು, ಅವುಗಳಲ್ಲಿ ಒಂದು ಮೂಲ ದಾಖಲೆ ಹಾಜರುಪಡಿಸಬೇಕು. ವಾಸದ ವಿಳಾಸಕ್ಕೂ 33 ದಾಖಲೆ ಪಟ್ಟಿ ಮಾಡಿದ್ದು, ಒಂದನ್ನು ಹಾಜರುಪಡಿಸಬೇಕು. ಆದರೆ, ಪಾಸ್‌ಪೋರ್ಟ್‌, ಮತದಾನದ ಗುರುತಿನ ಚೀಟಿ, ಚಾಲನಾ ಪರವಾನಗಿ ಮತ್ತು ಪಡಿತರ ಚೀಟಿಯಲ್ಲಿ ಒಂದನ್ನು ಹಾಜರುಪಡಿಸಿದರೆ ಅದನ್ನೇ ವಿಳಾಸ ಮತ್ತು ಗುರುತಿನ ದಾಖಲೆಯನ್ನಾಗಿ ಪರಿಗಣಿಸಲಾಗುವುದು.

2ನೇ ಹಂತದ ನೋಂದಣಿ ಎಲ್ಲೆಲ್ಲಿ?
ಬೆಂಗಳೂರು ನಗರ, ರಾಮನಗರ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ವಿಜಾಪುರ, ಧಾರವಾಡ, ಬಳ್ಳಾರಿ, ಬೀದರ್‌, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಮಂಡ್ಯ, ಹಾಸನ, ಕೊಡುಗು, ದಕ್ಷಿಣ ಕನ್ನಡ.