Are you unable to read text? Download FontHide

ಬೆಂಗ್ಳೂರು ಕೆಂಪೇಗೌಡ ಏರ್ಪೋರ್ಟ್‌

ನವದೆಹಲಿ: ದೇಶದ ಪ್ರತಿಷ್ಠಿತ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹೆಸರಿಡಬೇಕು ಎಂಬ ಕನ್ನಡಿಗರ ಬಹುದಿನದ ಬೇಡಿಕೆಗೆ ಮನ್ನಣೆ ದೊರೆತಿದೆ. 'ಸಿಲಿಕಾನ್‌ ಸಿಟಿ' ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕು ಎಂಬ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ.
ದೇಶದ 5ನೇ ಅತಿ ಕಾರ್ಯಶೀಲ ವಿಮಾನ ನಿಲ್ದಾಣವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂಬ ಕೂಗು ರಾಜ್ಯದೆಲ್ಲೆಡೆಯಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ವಿಮಾನಯಾನ ಸಚಿವಾಲಯ ಈ ಪ್ರಸ್ತಾವನೆಯನ್ನು ಕೇಂದ್ರ ಸಂಪುಟಕ್ಕೆ ಕಳುಹಿಸಿಕೊಟ್ಟಿತ್ತು. ಬುಧವಾರ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಸೌತ್‌ ಬ್ಲಾಕ್‌ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮರು ನಾಮಕರಣದ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು. ಇದರಿಂದಾಗಿ ರಾಜ್ಯ ರಾಜಧಾನಿಯನ್ನು ದೇಶ, ವಿದೇಶಗಳೊಂದಿಗೆ ಬೆಸೆಯುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ಮುಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ.
2008ರಲ್ಲಿ ಚಾಲನೆ:
ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ 2008ರ ಮೇ 24ರಂದು ಕಾರ್ಯಾಚರಣೆ ಆರಂಭಿಸಿದ್ದ ವಿಮಾನ ನಿಲ್ದಾಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರ„ವೇಟ್‌ ಲಿಮಿಟೆಡ್‌ (ಬಿಐಎಎಲ್‌)ನ ಒಡೆತನಕ್ಕೆ ಸೇರಿದೆ. ಇದರಲ್ಲಿ ರಾಜ್ಯ ಸರ್ಕಾರ, ಭಾರತೀಯ ವಿಮಾನ ಪ್ರಾಧಿಕಾರ, ಜಿವಿಕೆ ಗ್ರೂಪ್‌, ಸಿಮನ್ಸ್‌ ಮತ್ತು ಜ್ಯೂರಿಚ್‌ ಏರ್‌ಪೋರ್ಟ್‌ಗಳು ತಮ್ಮ ಶೇರು ಹೊಂದಿವೆ.
2012ರಲ್ಲಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವಂತೆ ಕೇಂದ್ರಕ್ಕೆ ಆಗ್ರಹಿಸಲಾಗಿತ್ತು. ಅಲ್ಲದೆ, ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಸಚಿವರುಗಳನ್ನು ದಿಲ್ಲಿಯಲ್ಲಿ ಭೇಟಿ ಮಾಡಿ, ಈ ಬಗ್ಗೆ ಒತ್ತಡ ಕೂಡ ಹೇರಲಾಗಿತ್ತು. ರಾಜ್ಯದ ಆಗ್ರಹಕ್ಕೆ ಈಗ ಸಮ್ಮತಿ ನೀಡುವುದರೊಂದಿಗೆ ಕನ್ನಡಿಗರ ಬಹುದಿನದ ಕೋರಿಕೆಯನ್ನು ಕೇಂದ್ರ ಸರ್ಕಾರ ಮನ್ನಿಸಿದಂತಾಗಿದೆ.

ದೇಶಕ್ಕೆ ಸೇವೆ ಸಲ್ಲಿಸಿದವರಿಗೆ ಅವರ ಕಾರ್ಯಸ್ಥಳದಲ್ಲೇ ಆದ್ಯತೆ ನೀಡಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರೊಂದಿಗೆ ಕನ್ನಡಿಗರ ಬಹುದಿನದ ಕೋರಿಕೆಯನ್ನು ಕೇಂದ್ರ ಮನ್ನಿಸಿದಂತಾಗಿದೆ. ಇದಕ್ಕಾಗಿ ರಾಜ್ಯದ ಜನತೆಯ ಪರವಾಗಿ ಪ್ರಧಾನಿ ಮತ್ತು ಸೋನಿಯಾ ಗಾಂಧಿಗೆ ಅಭಿನಂದನೆಗಳು.
- ಕೆ.ಎಚ್‌.ಮುನಿಯಪ್ಪ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ.